Sunday 15 March 2015

ಧರಣಿ ಮಂಡಲ ಮಧ್ಯದೊಳಗೆ

ಪುಣ್ಯಕೋಟಿಯ ಹಾಡನ್ನು ಕೇಳದ ಕನ್ನಡಿಗನಿದ್ದಾನೇ? ಇಲ್ಲವೆನಿಸುತ್ತದೆ. ನಮ್ಮ ಮತ್ತು ನಮ್ಮ ಹಿಂದಿನ  ಪೀಳಿಗೆಯವರೆಲ್ಲರಿಗೂ ಸುಪರಿಚಿತವಾಗಿರುವ ಹಸುವಿನ ಹಾಡದು. ರಾಗಬದ್ಧವಾಗಿ ಹಾಡಲು ಬರುವ, ಜಾನಪದ ಸೊಗಡಿರುವ, ಶುದ್ಧ ಕನ್ನಡದ ಅದ್ಭುತ ರಚನೆಯಿದು. ಮಗುವಿನ ಬಗೆಗಿನ ತಾಯಿಯ ಮಮತೆಯನ್ನು, ಅದಕ್ಕಿಂತ ಹಿರಿದಾದ ಸತ್ಯದ ಸತ್ವವನ್ನು ಎತ್ತಿಹಿಡಿಯುವ ಗೋವಿನಷ್ಟೇ, ’ಸುಳ್ಳು ಹೇಳುವ ಎಲ್ಲ ಅವಶ್ಯಕತೆಯಿದ್ದರೂ ಈ ಪುಣ್ಯಕೋಟಿ ಕೂಡ ಸತ್ಯವನ್ನು ಹೇಳುತ್ತಿರಲೂಬಹುದು’ ಎಂದು ಯೋಚಿಸಿ ಅದರ ಸತ್ಯಸಂಧತೆಯನ್ನು ರುಜುವಾತುಪಡಿಸಲು ಅವಕಾಶಕೊಡುವ ಮತ್ತು ಧರ್ಮಮಾರ್ಗದಲ್ಲಿ ನಡೆದ ಗೋವನ್ನು ತಿನ್ನದೇ ಬಿಡುವ ವ್ಯಾಘ್ರನೂ ಆಪ್ತನಾಗುತ್ತಾನೆ. ಅದಕ್ಕೇ ಈ ಹಾಡು ಇಷ್ಟೆಲ್ಲ ಮಕ್ಕಳ/ದೊಡ್ಡವರ ಹೃದಯದಲ್ಲಿ ಮನೆಮಾಡಿರುವುದು.

ನನಗೆ ಈ ಹಾಡಿನ ಪರಿಚಯವಾಗಿದ್ದು ನಾನು ೩-೪ ವರ್ಷದವನಾಗಿದ್ದಾಗ. ಆಗ ನಾನು ವರ್ಷದ ಎಂಟು ತಿಂಗಳು ಅಜ್ಜನ ಮನೆಯಲ್ಲಿರುತ್ತಿದ್ದೆ. ಪ್ರತಿ ಸಂಜೆ ದಿನದ ಆಟವೆಲ್ಲ ಮುಗಿದ ಬಳಿಕ ಕೈಕಾಲು ತೊಳೆದು ಬಂದು ದೇವರ ಕೋಣೆಯಲ್ಲಿ ಕುಳಿತು ಬಾಯಿಪಾಟ ಒಪ್ಪಿಸಿದ ಬಳಿಕ ದೊಡ್ಡಮ್ಮ ಹೇಳುತ್ತಿದ್ದ ಹಾಡು ಇದು. ಎಷ್ಟು ಕೇಳಿದರೂ ಸಾಕೆನಿಸದು, ಪ್ರತೀ ದಿನವೂ ಕೇಳಲೇಬೇಕು, ಪ್ರತೀ ದಿನವೂ ಪುಣ್ಯಕೋಟಿಯನ್ನು ಮೆಚ್ಚಲೇಬೇಕು, ಪುಣ್ಯಕೋಟಿಯು ಕರುವನ್ನು ಸಮಾಧಾನಿಸುವಾಗ ಕರುವಿನ ಜೊತೆಗೆ ನಾನೂ ಕಣ್ಣೀರಾಗಲೇಬೇಕು, ಪುಣ್ಯಕೋಟಿ ಸಾಯುವುದಿಲ್ಲ ಎಂದು ಗೊತ್ತಾದಾಗ ಒಂದು ಸಮಾಧಾನ ಹುಟ್ಟಿ ನಾನು ಕಣ್ಣೊರೆಸಿಕೊಳ್ಳಬೇಕು, ಅರ್ಬುತ ಪ್ರಾಣತ್ಯಾಗ ಮಾಡುವಾಗ ಸತ್ಯವನ್ನೇ ಮಾತನಾಡಬೇಕು ಎಂಬ ನೀತಿಯನ್ನು ದೊಡ್ಡಮ್ಮ ಹೇಳಲೇಬೇಕು. ಈ ದಿನಚರಿ ವರ್ಷಗಟ್ಟಲೇ ನಡೆದಿತ್ತು. ಪ್ರತೀ ದಿನವೂ ಅತ್ತರೂ ಒಂದು ದಿನವೂ ಹಾಡು ಕೇಳುವುದು ತಪ್ಪುತ್ತಿರಲಿಲ್ಲ. ಈ ಹಾಡಿನಲ್ಲಿ ಅಂತದ್ದೊಂದು ಮೋಡಿ ಇತ್ತು, ಹೇಳುತ್ತಿದ್ದ ರೀತಿಯಲ್ಲಿ ತಿರುತಿರುಗಿ ಕೇಳಿದರೂ ಬೇಜಾರು ಬರದ ಆಕರ್ಷಣೆ ಇತ್ತು, ಕತೆಯಲ್ಲಿ ಪ್ರತಿ ಬಾರಿಯೂ ಅಂದಿನ ಬಾಲ-ಸುಬ್ರಹ್ಮಣ್ಯನ ಕಣ್ಣುಗಳಲ್ಲಿ ನೀರಿಳಿಸುವಷ್ಟು ಹಾಗೂ ಮತ್ತೂ ಒಂದಿಷ್ಟು ಭಾವನಾತ್ಮಕತೆ ಇತ್ತು.

ಪುಣ್ಯಕೋಟಿಯದ್ದು ಒಂದು ಸರಳ ನೀತಿಕತೆ. ಪುಣ್ಯಕೋಟಿ ಕರ್ನಾಟ ದೇಶದ ಒಬ್ಬ ಗೊಲ್ಲನ ದೊಡ್ಡಿಯ ಗೋವು. ಒಂದು ದಿನ ಮೇಯಲು ಕಾಡಿಗೆ ಹೋಗಿದ್ದಾಗ ಅರ್ಬುತ ಎಂಬ ವ್ಯಾಘ್ರ(ನೆನಪಿಟ್ಟುಕೊಳ್ಳಿ, ಅದು ದುಷ್ಟವ್ಯಾಘ್ರವಲ್ಲ, ಬರೀ ವ್ಯಾಘ್ರ)ನ ಕೈಯಲ್ಲಿ ಸಿಕ್ಕಿಕೊಂಡು ಬೀಳುತ್ತಾಳೆ. ಬಗೆದು ತಿನ್ನುತ್ತೇನೆ ಎನ್ನುವ ಹುಲಿರಾಯನಲ್ಲಿ ತನ್ನ ಚಿಕ್ಕ ಕರುವಿಗೆ ಕೊನೆಯ ಬಾರಿ ಮೊಲೆಯಿತ್ತು ಬೀಳ್ಕೊಟ್ಟು ಬರುತ್ತೇನೆ, ದಯವಿಟ್ಟು ಹೋಗಿ ಬರಲು ಅವಕಾಶ ಮಾಡಿಕೊಡು ಎನ್ನುತ್ತದೆ. ಪುಣ್ಯಕೋಟಿಯನ್ನು ಮೊದಮೊದಲು ಅನುಮಾನಿಸಿದರೂ ನಂತರ ಅರ್ಬುತ ಪುಣ್ಯಕೋಟಿಗೆ ಹೋಗಿಬರಲು ಅವಕಾಶ ಮಾಡಿಕೊಡುತ್ತದೆ. ಎಂತಿದ್ದರೂ ಹೀಗೆ ಹೋದ ಹಸು ಎಂದಿಗೂ ತಿರುಗಿಬರಲಾರದು ಎಂಬ ಧೈರ್ಯದಲ್ಲಿದ್ದ ಅರ್ಬುತನ ನಂಬಿಕೆಯನ್ನು ಸುಳ್ಳು ಮಾಡುವಂತೆ ಪುಣ್ಯಕೋಟಿ ತಿರುಗಿ ಬರುತ್ತಾಳೆ, ಅದೂ ಅವಸರ ಅವಸರವಾಗಿ. ತನ್ನ ಲೆಕ್ಕಾಚಾರವನ್ನು ಬುಡಮೇಲು ಮಾಡಿ, ಸತ್ಯವನ್ನು ಮೆರೆದ ಪುಣ್ಯಾತ್ಗಿತ್ತಿ ಪುಣ್ಯಕೋಟಿಯಂತವಳ ಬಗ್ಗೆ ಸಂಶಯ ಪಟ್ಟೆನಲ್ಲಾ, ಇವಳನ್ನು ತಿನ್ನಲು ಹವಣಿಸಿದೆನಲ್ಲಾ ಎಂಬ ತನ್ನನ್ನು ತಾನೇ ಹಳಿದುಕೊಂಡು ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇಲ್ಲಿ ಅರ್ಬುತ ಸಾಯವ ಅಗತ್ಯವಿರಲಿಲ್ಲ ಎಂಬುದು ನಿಜವಾದರೂ ಇಷ್ಟು ಚಂದದ ನೆನಪುಗಳನ್ನು ಕೊಟ್ಟ ಹಾಡಿನ ಅಷ್ಟು ಚಿಕ್ಕ ತಪ್ಪನ್ನು ಕೆದಕುವುದು ಕೃತಘ್ನತೆಯಾದೀತು.

ಎಲ್ಲವೂ ರಾಗ ಬದ್ಧ ಇಲ್ಲಿ, ಪ್ರಾಸದ ಜೊತೆಗೆ. ಎಲ್ಲವೂ ನೀತಿಯುಕ್ತ ಇಲ್ಲಿ, ಖಳನಾಗಿ ಚಿತ್ರಿತವಾದ ಹುಲಿರಾಯನೂ ನೀತಿಯ ಗೆರೆಯನ್ನು ದಾಟಿ ನಡೆಯಲಾರ. ಪುಣ್ಯಕೋಟಿಯಂತೂ ನಮ್ಮ ಕರ್ನಾಟ ದೇಶದ ಲೋಕಲ್ ಸತ್ಯ ಹರಿಶ್ಚಂದ್ರ. ಮುಂಜಾವಿನ ಸಮಯದಲ್ಲಿ ಕೊಳಲನ್ನು ಬಾರಿಸುತ್ತಾ ಎಲ್ಲ ಗೋವುಗಳ ಹೆಸರು ಹಿಡಿದು ಕರೆವ ಗೊಲ್ಲನ ಚಿತ್ರಣವೂ ಇಲ್ಲಿ ಸ್ಪಟಿಕ ಸ್ಪಷ್ಟ. ಹುಲಿಯ ಬಳಿ ಕೊನೆಯ ಬಾರಿ ಮಗುವನ್ನು ನೋಡಿಬರಲು ಕಳಿಸಿಕೊಡಲು ಕೇಳಿಕೊಳ್ಳುವಾಗ, ತನ್ನ ಒಡಹುಟ್ಟು ದನಗಳ ಬಳಿ ತನ್ನ ಕರುವನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳುವಾಗ, ಮತ್ತೆ ಹುಲಿಯ ಎದುರು ಬಂದು ನಿಂತು ಈಗ ನನ್ನನ್ನು ತಿನ್ನು ಎಂದು ಹೇಳುವಾಗ ಪುಣ್ಯಕೋಟಿಯ ಗಂಟಲು ಉಬ್ಬಿ ಬರುವುದೂ ವೇದ್ಯವಾಗಿಸುವಷ್ಟು ಶಕ್ತಿಶಾಲಿ ನಮ್ಮ ಈ ಪುಣ್ಯಕೋಟಿಯ ಹಾಡು. ಕಥನ-ಕಾವ್ಯಗಳ ಪ್ರ‍ೇಮಿಗಳ ಪಾಲಿಗೆ(ನಾನೂ ಒಬ್ಬ ಈ ಗುಂಪಿನಲ್ಲಿ) ಪುಣ್ಯಕೋಟಿಯ ಹಾಡು ಹೃದಯಕ್ಕೆ ಅತಿ ಹತ್ತಿರವಾದದ್ದು. ಜನಪದದ ಕೊಡುಗೆಯಾದ ಈ ಹಾಡಿನ ಬಳಕೆಯೇ ಈ ಹಾಡಿಗೆ, ಹಾಡು ಕಟ್ಟಿದ ಅನಾಮಿಕ ಜನಪದಕ್ಕೆ ನಾವು ಕೊಡಬಹುದಾದ ಕೊಡುಗೆ. ನಮ್ಮ ಮನೆಯ ಮಕ್ಕಳಿಗೆ ಹೇಳಿಕೊಡುವ ಮೂಲಕ, ತಂತ್ರಜ್ಞಾನದ ಇಂದಿನ ಕಾಲದಲ್ಲಿ, ಕೊನೆಪಕ್ಷ ಯೂಟ್ಯೂಬಿನಲ್ಲಿ ಕೇಳಿಸುವ ಮೂಲಕ ಈ ಹಾಡನ್ನು, ಇಂತದ್ದೇ ಎಷ್ಟೋ ಹಾಡು-ಕಥೆಗಳನ್ನು ಉಳಿಸಬಹುದು, ಬೆಳೆಸಬಹುದು. ಉಳಿಸೋಣ, ಬೆಳೆಸೋಣ ನಾವು.

ಸೂಚನೆ.  ಪುಣ್ಯಕೋಟಿಯ ಹಾಡಿನ ಯೂಟ್ಯೂಬಿನ ಕೊಂಡಿ ಪುಣ್ಯಕೋಟಿ . ಒಮ್ಮೆ ಕೇಳಿಬಿಡಿ, ಬಾಲ್ಯಕ್ಕೊಮ್ಮೆ ಹೋಗಿಬನ್ನಿ. 

10 comments:

  1. " ಕುರಿತೊದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ " ಎನ್ನುವಂತೆ, ಹಿಂದಿನ ಜನರಿಗೆ ವಿದ್ಯೆಯ ಅರಿವಿಲ್ಲದಿದ್ದರೂ, ಅರಿವು ಮೂಡಿಸುವ ಕಾವ್ಯ ರಚಿಸಿ ಅಜರಾಮರರೆನಿಸಿಕೊಂಡಿದ್ದಾರೆ. ಅದಕ್ಕೊಂದು ನಿದರ್ಶನವೇ ಈ ಪುಣ್ಯಕೋಟಿಯ ಹಾಡು. ಅಂಥಹ ನೀತಿ ಹೇಳುವ ಗೀತ ರಚಿಸಿದ ಜನಪದರಿಗೆ ನಮ್ಮದೊಂದು ಸಲಾಮ್ !!!!!

    ReplyDelete
    Replies
    1. ಹು ಅನುಷಾ, ಸಾಂಪ್ರದಾಯಿಕ ವಿದ್ಯಾಭ್ಯಾಸ ಇಲ್ಲದ ಜನಸಾಮಾನ್ಯರು ಎಷ್ಟೆಲ್ಲ ಜನಪದ ರಚನೆಗಳನ್ನು ಮಾಡಿರುವುದು ಆಶ್ಚರ್ಯಕರವೂ, ಹೆಮ್ಮೆ ಪಡುವಂತದ್ದೂ ವಿಷಯ. ಅದೂ ರಾಗಕ್ಕೆ ಅನುಕೂಲವಾಗುವಂತೆ, ಪ್ರಾಸಕ್ಕೆ ಭಂಗ ಬರದಂತೆ ಲಯಬದ್ಧವಾಗಿ ಕವಿತೆ ರಚನೆ ಮಾಡುವುದೆಂದರೆ ದೊಡ್ಡ ವಿಷಯವೇ ಸರಿ. ಈ ಸಾಧನೆಗಳನ್ನು ನಾವು ಎಷ್ಟು ಸಂಭ್ರಮಿಸಿದರೂ ಕಡಿಮೆಯೇ.

      ಧನ್ಯವಾದಗಳು, ಬ್ಲಾಗಿಗೆ ಬಂದಿದ್ದಕ್ಕೆ. ಕಮೆಂಟ್ ಮಾಡಿದ್ದಕ್ಕೆ. ಖುಷಿಯಾಯ್ತು. ಬತ್ತಾ ಇರು.

      Delete
  2. ಬೆಳೆಯುತ್ತ ಬೆಳೆಯುತ್ತ ಆ ಹಾಡಿನ ನೀತಿಯ ಎಷ್ಟು ಮಟ್ಟಿಗೆ ಅಳವಡಿಸಿಕೊಂಡೆವೋ, ಉಳಿಸಿಕೊಂಡೆವೋ ಗೊತ್ತಿಲ್ಲವಾಗಲೀ ಬಾಲ್ಯ ಮಾತ್ರ ಈ ಹಾಡಿನ ಹೊರತಾಗಿ ಅಪೂರ್ಣವಾಗುತ್ತಿತ್ತು ಎನ್ನಿಸುತ್ತದೆ...
    ಎಷ್ಟು ಸಶಕ್ತವಾಗಿ ಬಾಲ್ಯವನ್ನು ಈ ಹಾಡು ಆವರಿಸಿತ್ತು ಎಂದರೆ ಆ ಗೊಲ್ಲ ಕಾಳಿಂಗ, ಗೋವು ಪುಣ್ಯಕೋಟಿ, ಹುಲಿ ಅರ್ಭುದ, ಆ ಕಾಡು - ದೊಡ್ಡಿ ಎಲ್ಲರೂ ಎಲ್ಲವೂ ನಮ್ಮದೆನ್ನಿಸುವಷ್ಟು...
    ಅವತ್ತು ಸುರಿದ ಕಣ್ಣ ಹನಿಗಳು ಕೂಡ ಪ್ರಿಯವೆನ್ನಿಸುತ್ತೆ ಇಂದು...
    ;;;;;
    ಬಾಲ್ಯವನ್ನು ನೆನಪಿಸಿದ ಬರಹ ಇಷ್ಟವಾಯಿತು ಕಣೋ...

    ReplyDelete
    Replies
    1. ವತ್ಸಾ,

      ಈಗ ಗೊತ್ತಿಲ್ಲ(ಗೊತ್ತಿಲ್ಲ ಎನ್ನುವುದಕ್ಕಿಂತ ಆಗುವುದಿಲ್ಲ), ಆಗಂತೂ ನಾನು ಪುಣ್ಯಕೋಟಿಯ ನೀತಿಯನ್ನು ನೂರಕ್ಕೆ ನೂರರಷ್ಟು ಪಾಲಿಸಿದ್ದೆ. ಬಹುತೇಕ ಎಲ್ಲಾ ಮಕ್ಕಳೂ ಹಾಗೇ ಇರುತ್ತಾರೆ ಅಲ್ಲವೇ? ಅದಕ್ಕೆ ಒಂದು ಚಿಕ್ಕ ಪ್ರೇರಣೆ ಪುಣ್ಯಕೋಟಿ ಇರಬಹುದೇ, ಅಲ್ಲ ಎನ್ನಲಾರೆ. ನೀನು ಹೇಳಿದ ಹಾಗೆ ಪದ್ಯದ ಪ್ರತೀ ಪಾತ್ರವೂ ನಮ್ಮ ಜೀವನದ ಭಾಗವೇ ಆಗಿದ್ದವು. ಎಲ್ಲೋ ನಾವೂ ಆ ಕಥೆಯನ್ನು ಕಣ್ಣಾರೆಯಾಗಿ ಕಂಡಿದ್ದೆವೇನೋ ಎಂಬಷ್ಟು ಸ್ಪಷ್ಟತೆ ನನಗಿತ್ತು, ಇಂದಿಗೂ ಇದೆ.

      ಧನ್ಯವಾದಗಳು, ಬ್ಲಾಗಿಗೆ ಬಂದಿದ್ದಕ್ಕೆ. ಇಷ್ಟ ಪಟ್ಟಿದ್ದಕ್ಕೆ. ಖುಷಿ ಆಯ್ತು. ಬತ್ತಾ ಇರು.

      Delete
  3. ಅತ್ಯಂತ ಮಾರ್ಮಿಕ ನೀತಿ ಗೀತೆಯನ್ನು ಮರು ನೆನಪಿಸಿದ ನಿಮಗೆ ಶರಣು.

    ReplyDelete
    Replies
    1. ಧನ್ಯವಾದಗಳು, ಬ್ಲಾಗಿಗೆ ಬಂದಿದ್ದಕ್ಕೆ. ಇಷ್ಟ ಪಟ್ಟಿದ್ದಕ್ಕೆ. ಖುಷಿ ಆಯ್ತು. ಬರ್ತಾ ಇರಿ.

      Delete
  4. ಸತ್ಯವೇ ಭಗವಂತನೆಂಬಾ ಪುಣ್ಯಕೋಟಿಯ ಕಥೆಯಿದು .... ಪುಣ್ಯಕೋಟಿ ಕರುವನ್ನು ಸಂತೈಸುವಾಗ ಕಣ್ಣೀರಾಗುವ ನಾನು ಅರ್ಭುತ ಸಾಯುವಾಗಲೂ ಕಣ್ಣೀರಾಗುತ್ತಿದ್ದೆ ... ಒಳ್ಳೆಯ ಲೇಖನ ಚಂದದ ಹಾಡಿನ ಬಗ್ಗೆ ...



    Sanputta...:)

    ReplyDelete
    Replies
    1. ಸಂಧ್ಯಕ್ಕಾ,

      ಹೌದು, ನಾನೂ ನಿನ್ನ ಹಾಗೇ ಇದ್ದೆ. ಪುಣ್ಯಕೋಟಿ ಕರುವನ್ನು ಸಂತೈಸುವಾಗ ಶುರುವಾಗುತ್ತಿದ್ದ ಅಳು, ಅರ್ಬುತ ಸಾಯುವಾಗ ತಾರಕಕ್ಕೇರುತ್ತಿತ್ತು. ಕೆಲವೊಮ್ಮೆ ಹಾಡು ಕೇಳಿಸುತ್ತಿದ್ದ ದೊಡ್ಡಮ್ಮ ನಾಳೆಯಿಂದ ಹಾಡು ಹೇಳುವುದಿಲ್ಲ ಎಂದು ಧಮಕಿ ಹಾಕಿ ನಿಲ್ಲಿಸಬೇಕಿತ್ತು ನನ್ನ ಅಳುವನ್ನು. ನೆನೆಸಿಕೊಂಡರೆ ಈಗಲೂ ಮನಸ್ಸು ನೆನೆಯುತ್ತದೆ.

      ಖುಷಿ ಆಯ್ತು ಇಷ್ಟ ಆಗಿದ್ದು. ಧನ್ಯವಾದಗಳು ಬ್ಲಾಗಿಗೆ ಬಂದಿದ್ದಕ್ಕೆ, ಕಮೆಂಟಿಸಿದ್ದಕ್ಕೆ. ಬರ್ತಾ ಇರಿ. :)

      Delete
  5. >> ಅರ್ಬುತ << ವಾವ್ ಸುಬ್ಬಪ್ಪ ! ಎಲ್ಲಿಂದ ಹುಡ್ಕಂಡು ಬಂದ್ಯೋ ಇದ್ನ ? ಪ್ರತೀ ಬಾರಿಯೂ ನಿನ್ನ ಬ್ಲಾಗಿಗೆ ಕರ್ಕಂಬರದು ಇಂತದ್ದೇ ಅಚ್ಚರಿಗಳು. ಚೆಂದ ಬರದ್ದೆ ಪುಣ್ಯಕೋಟಿ ಬಗ್ಗೆ. ಈ ಹಾಡು ಕೇಳ್ದಾಗೆಲ್ಲ ನಂಗೂ ನನ್ನ ಬಾಲ್ಯದ ಘಟನೆಗಳು ನೆನಪಾಗುತ್ವೆ. ನಮ್ಮೂರ ದೊಡ್ಡ ದೊಡ್ಡ ಕೊಟ್ಟಿಗೆಗಳು, ಅಲ್ಲಿಂದ್ಲೇ ಒಂದು ದನ ಹಿಂಗೆ ಹುಲಿರಾಯನಿಗೆದುರಾದ ಹಾಗೆ, ಮರಳಿ ಬಂದು ಮತ್ತೆ ಹೋಗಬೇಕಾದ ಪರಿಸ್ಥಿತಿಯ ಹಾಗೆ ಕಲ್ಪನೆಗಳು ಗರಿಗೆದರುತ್ತಿದ್ದ ಆ ದಿನಗಳು ನೆನಪಾಗುತ್ವೆ. ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ... ಅನ್ನೋ ಸಾಲುಗಳು ತಾಯಿ,ಮಗುವಿನ ಮಮತೆಯ ಸನ್ನಿವೇಶಗಳನ್ನು ನೆನಪಿಸಿ ಕಣ್ಣಂಚ ತೇವಗೊಳಿಸುತ್ತಿದ್ದ ದಿನಗಳು ನೆನಪು ಮರಳಿಸುತ್ತೆ. ಚೆಂದದ ಬರಹಕ್ಕೊಂದು ಧ.ವಾ :-)

    ReplyDelete
    Replies
    1. ಪ್ರಶಸ್ತಿ,

      ನನಗೂ ಹಾಗೇ ಅನ್ನಿಸುತ್ತಿತ್ತು. ಎಲ್ಲಿ ನನ್ನಜ್ಜನ ಮನೆಯ ದನವೇ ಹುಲಿಯ ಜೊತೆ ಮಾತನಾಡಿ ಒಪ್ಪಿಸಿ ಬಂದಿದ್ದೇನೋ ಎಂಬಷ್ಟು ಸಮೀಪದ್ದಾಗಿ ಕಾಣುತ್ತಿತ್ತು ಹಾಡು. ಕೆಲವೊಮ್ಮೆ ಅಳುಮೊರೆಯಲ್ಲಿ ನಾನು ಹಟ್ಟಿಗೂ ಹೋಗಿ ಬರುತ್ತಿದ್ದನಂತೆ ಹಾಡು ಕೇಳಿದ ತಕ್ಷಣ, ಸುಮ್ಮನೇ. ಚಿಕ್ಕಂದಿನ ಭಾವುಕ, ಮಧುರ ದಿನಗಳವು. ಎಲ್ಲವೂ ಎಷ್ಟು ಸರಳ, ಸುಂದರವಾಗಿದ್ದವು ಎನ್ನಿಸುತ್ತದೆ.

      ನಾನು ಚಿಕ್ಕವನಾಗಿದ್ದಾಗ ಮಳೆಗಾಲದಲ್ಲಿ ನನ್ನ ಅಪ್ಪ ಅಮ್ಮ ನನ್ನನ್ನು ಅಜ್ಜನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು, ಕುಂದಾಪುರದಲ್ಲಿ. ಮಳೆಗಾಲದ ದಿನಗಳಲ್ಲಿ ಸಿರಸಿಯ ಮಳೆಯಲ್ಲಿ ನನ್ನನ್ನು ಕರೆದುಕೊಂಡು ಶಾಲೆಗೆ ಹೋಗುವುದು ಅಮ್ಮನಿಗೆ ಕಷ್ಟಸಾಧ್ಯವಾಗಿದ್ದರಿಂದ ಈ ವ್ಯವಸ್ಥೆ ಇತ್ತು. ಅಮ್ಮ ನನ್ನನ್ನು ಬಿಟ್ಟು ಹೋಗುವಾಗ ನನ್ನ ಮಾವಂದಿರು ಪುಣ್ಯಕೋಟಿಯ ಹಾಡನ್ನು(ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ, ಕಂದ ನಿಮ್ಮವನೆಂದುಕೊಂಡು ..... ಎಂಬ ಸಾಲುಗಳನ್ನು ಮುಖ್ಯವಾಗಿ) ಹೇಳಿ ಚಾಳಿಸುತ್ತಿದ್ದರಂತೆ. ಈಗ ನಗೆ ಬರುತ್ತದೆ. ಆಗ ಎಷ್ಟು ಅತ್ತಿದ್ದೆನೋ?

      ಖುಷಿ ಆಯ್ತು ಬ್ಲಾಗಿಗೆ ಬಂದಿದ್ದಕ್ಕೆ. ಇಷ್ಟಪಟ್ಟಿದ್ದಕ್ಕೆ, ಕಮೆಂಟ್ ಮಾಡಿದ್ದಕ್ಕೆ, ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು. ಬರ್ತಾ ಇರಿ. :)

      Delete