Saturday, 10 December 2011

ಒಂದು ನಾಣ್ಯ-ಎರಡು ಮುಖ


ಅವರ ಹೆಸರು NS ಸೀತಾ ಎಂದು,ಎಲ್ಲರೂ NSS ಎಂದು ಕರೆಯುತ್ತಿದ್ದರು. ನಮ್ಮ ಕಾಲೇಜಿನಲ್ಲಿ ಫಿಸಿಕ್ಸ್ ಶಿಕ್ಷಕಿ. ಕಡಿಮೆಯೆಂದರೂ ೩೦ ವರ್ಷಗಳ ಅನುಭವವಿದ್ದವರು. ವಿಷಯದಲ್ಲಿಯೇ ತಲ್ಲೀನವಾಗಿ ಬಿಡುತ್ತಿದ್ದ ಅವರ ಶೈಲಿ ಎಲ್ಲರಿಗೂ ಅಚ್ಚುಮೆಚ್ಚು. ಕೆಲವೊಮ್ಮೆ ಹೆಚ್ಚಾಗಿಯೇ ತಮ್ಮನ್ನು ತಾವೇ ತೊಡಗಿಸಿಕೊಂಡುಬಿಡುತ್ತಿದ್ದ ಅವರ ಕೆಲವು ಹಾವಭಾವಗಳನ್ನು, ಕೈ ತಿರುಗಿಸುವ ವಿಧಾನವನ್ನು ನಾವು ಅದೇಷ್ಟೋ ಸಲ ಆಡಿಕೊಂಡಿದ್ದೇವೆ, ಕೆಲವೊಮ್ಮೆ ಈ ಮಂಗಾಟಗಳನ್ನು ನೋಡಿದ್ದರಾದರೂ ನಕ್ಕು ಸುಮ್ಮನಾಗಿ ಬಿಡುತ್ತಿದ್ದಷ್ಟು ಪ್ರಬುದ್ಧರಾಗಿದ್ದರು, ಕೊನೆ ಪಕ್ಷ ನಮಗೆ ಹಾಗೆ ಕಾಣುತ್ತಿದ್ದರು.
ಇವೆಲ್ಲದರ ಮಧ್ಯೆ ಅವರಿಗೆ ಅವರದ್ದೇ ಒಂದು ವಿಶಿಷ್ಟ ಲಕ್ಷಣವಿತ್ತು, ಅವರ ವರ್ಷಕ್ಕೆ ಹೋಲಿಕೆಯಾಗದ ತಲೆಗೂದಲು. ಎಲ್ಲೂ ಒಂದೂ ಕೂದಲಿನಲ್ಲೂ ವರ್ಷದ ಛಾಯೆ ತಾಗದಂತೆ ಎಲ್ಲಕೂದಲೂ ಅಚ್ಚಕಪ್ಪು, ಅದೂ ದಿನವೂ ಒಂದು ಕೂದಲೂ ಅದರ ಜಾಗ ಬಿಟ್ಟು ಸ್ವಲ್ಪವೂ ಕೊಂಕಾಗುತ್ತಿರಲಿಲ್ಲ, ’ಕೂದಲು ಕೊಂಕದ ಹಾಗೆ’ ಅಂತಾರಲ್ಲ ಹಾಗೆ. ಹೆದರಬೇಡಿ, ಅವರೇನೂ ಪುಟ್ಟಪರ್ತಿ ಸಾಯಿಬಾಬಾರ ಮತ್ತೊಂದು ಅವತಾರವಲ್ಲ, ಇವರು ವಿಗ್ ಹಾಕುತ್ತಿದ್ದರು ಎಂಬ ವಿಷಯ ಅವರಷ್ಟೇ ಚೆನ್ನಾಗಿ ಅವರ ಶಿಷ್ಯಗಣಕ್ಕೂ ಗೊತ್ತಿತ್ತು. ಅವರ ವಿಗ್ ಬಗ್ಗಂತೂ ಸಾವಿರಾರು ಕತೆಗಳು ಹುಟ್ಟಿ ದಂತಕತೆಗಳಾಗುವ ಮಟ್ಟಿಗೆ ಬೆಳೆದಿದ್ದವು. ಇಂಜಿನಿಯರಿಂಗ್ ಕಾಲೇಜುಗಳೆಂದರೆ ಗೊತ್ತಲ್ಲ, ಹೀಗೆ, ಯಾರೋ ಒಬ್ಬ ಹೇಳಿದ್ದ ಜೋಕ್ ಒಂದು ಕತೆಯಾಗಲು ಹೆಚ್ಚು ದಿನ ಬೇಡ ಇಲ್ಲಿ, ಯಾರ ಬಗ್ಗೆ ಬೇಕಿದ್ದರೂ ಇರಬಹುದು. ನಾನೇನೂ ಇದಕ್ಕೆ ಹೊರತಲ್ಲ, ಅವರನ್ನು ಬಹಳೇ ಗೌರವಿಸುತ್ತಿದ್ದೆನಾದರೂ ಅವರ ಬಗ್ಗೆ ಆಡಿಕೊಳ್ಳುವುದರಲ್ಲಿ ನಾನೂ ಹಿಂದೆಬಿದ್ದಿರಲಿಲ್ಲ. ಆದರೆ ಒಂದುದಿನದ ಒಂದು ಲೋಕಾಭಿರಾಮದ ಮಾತುಕತೆಯಲ್ಲಿ ಎಲ್ಲವೂ ಬದಲಾಗಿದ್ದವು.
ಅದೊಂದು ದಿನ ನಾವು  ಪ್ರೊಜೆಕ್ಟ್ ಮೇಟ್ಸ್ ಎಲ್ಲ OAT(Open Air Theatre)ಯಲ್ಲಿ ಕೂತು ಊಟ ಮಾಡುತ್ತಿದ್ದೆವು. ಮಾತು ಹೀಗೇ ಆಚೀಚೆ ದಿಕ್ಕುದೆಸೆಯಿಲ್ಲದ ಅತ್ತಿತ್ತ, ಎತ್ತಲೋ ಹರಿಯುತ್ತಿತ್ತು. ಕೊನೆಗೆ ಮೊದಲ ವರ್ಷದ ಇಂಜಿನಿಯರಿಂಗ್ ನ ನೆನಪುಗಳ ಬಗ್ಗೆ, ಕೆಲವು ಟೀಚರ್ ಗಳ ಮೂರ್ಖತನದ ಬಗ್ಗೆ, ನಮ್ಮದೇ ಕ್ಷುಲ್ಲಕ ಕ್ಷಣಗಳ ಬಗ್ಗೆ ಹೀಗೇ ಗುರಿಯಿಲ್ಲದೇ ಮಾತು ಹರಟೆಯಾಗುತ್ತಿತ್ತು. ಟೀಚರ್ ಗಳ ಬಗ್ಗೆ ಆಡಿಕೊಳ್ಳುವ ಕಾರ್ಯಕ್ರಮ ಅವ್ಯಾಹತವಾಗಿ ನಡೆದಿತ್ತು. ಮಧ್ಯೆ ನಾನೇತಕ್ಕೋ ಇವರ ವಿಚಾರ ತಂದೆ,
"ನನಗಿನ್ನೂ ನೆನಪಿದೆ, ಮೊದಲ  ವರ್ಷದಲ್ಲಿ NSS ಬರುತ್ತಿದ್ದರಲ್ಲ. ಅವರು ಹಾಗೂ ಅವರ ವಿಗ್ ಬಹಳೇ ಮಜವಾಗಿರುತ್ತಿತ್ತು. ಈಗ ಬೇರೆ ವಿಗ್ ಹಾಕಿಕೊಂಡು ಬರುತ್ತಿದ್ದಾರೆ ಎನಿಸುತ್ತದೆ. ಯಾಕಾದರೂ ಇವರೆಲ್ಲ... " 
ಇನ್ನೂ ನಾನು ವಾಕ್ಯವನ್ನು ಮುಗಿಸಿರಲಿಲ್ಲ, ಅಲ್ಲೇ ಇದ್ದ ಇಂದುಜಾಳಿಗೆ ತಡೆಯಲಾಗಲಿಲ್ಲ ಎನಿಸುತ್ತದೆ,
"Dude, ಅವರ ಬಗ್ಗೆ ಏನೂ ಗೊತ್ತಿಲ್ಲದೆ ಸುಮ್ಮನೇ ಯಾಕೆ ಆಡಿಕೊಳ್ಳುತ್ತೀಯಾ. ಅವರಿಗೆ ಕ್ಯಾನ್ಸರ್ ಇದೆ ಎಂದು ನಿನಗೆ ಗೊತ್ತಾ, ಅದಕ್ಕೆ ಕೊಡುವ ಟ್ರೀಟ್ ಮೆಂಟಿನಿಂದ ಅವರ ಕೂದಲೆಲ್ಲ ಬಿದ್ದುಹೋಗುವುದರಿಂದ ಅವರು ವಿಗ್ ಹಾಕಿಕೊಳ್ಳುತ್ತಾರೆ ಎಂದು ಗೊತ್ತೇ, ಆಡಿಕೊಳ್ಳುವುದು ತಪ್ಪಲ್ಲದಿದ್ದರೂ ಎಲ್ಲರ ಬಗ್ಗೆಯೂ ಆಡಿಕೊಳ್ಳುವುದು, ಅದೂ ಇಂತಹ ಕೇಸ್ ಗಳಲ್ಲಿ ತಪ್ಪಾಗಬಹುದೇನೋ!" 
ಎಂದು almost ಕಿರುಚಿದಳು. ಒಂದು ರೀತಿಯಲ್ಲಿ ಅವಮಾನಕ್ಕೆ ಮೀರಿದ ನಾಚಿಕೆಯಾಗಿತ್ತು ನನಗೆ. ಏನು ಪ್ರತಿಕ್ರೀಯೆ ಕೊಡಬೇಕು ಎಂದು ತಿಳಿಯದ ಹಾಗೆ ಮೂಕನಾಗಿ ಕುಳಿತಿದ್ದೆ ಅಲ್ಲಿಯೇ . ನಾವು ತಿಳಿಯದೆ ಎಷ್ಟು ತಪ್ಪು ಮಾಡುತ್ತೀವಲ್ಲಾ ಎನ್ನಿಸಿತು. ತಪ್ಪೋ ಸರಿಯೋ, ಗೊತ್ತಿದ್ದೋ ಗೊತ್ತಿಲ್ಲದೆಯೋ, ನನ್ನಲ್ಲಿ ಒಂತರಾ ಅಪರಾಧಿಪ್ರಜ್ಞೆ ತುಂಬಿ ಮಂಕಾಗಿದ್ದು ನಿಜ. ನೀವಿದ್ದರೂ ಹಾಗೇ ಅಗುತ್ತಿತ್ತು ಅಲ್ಲವೇ?

6 comments:

 1. ಡಿವಿಜಿ ಅವರ ಜೀವನದ ರಸಪ್ರಸಂಗಗಳ ಕುರಿತ ಪುಸ್ತಕ "ಬ್ರಹ್ಮಪುರಿಯ ಭಿಕ್ಷುಕ" ಪುಸ್ತಕದಲ್ಲಿ "ಹಳಿಯುವುದಾದರೆ ತಿಳಿದು ಹಳಿ" ಎಂದು ಒಂದು ಘಟನಯ ಕುರಿತು ಲೇಖನವಿದೆ. ಅದರಲ್ಲಿ ಕೈಲಾಸಂರವರ ಬಗ್ಗೆ ಹೀಗೆ ಯಾರೋ ಹಳಿದು ಮಾತನಾಡಿದ್ದನ್ನು ಡಿವಿಜಿಯವರು ವಿರೋಧಿಸಿದರಂತೆ. ಯಾಕೆಂದರೆ ಒಬ್ಬ ವ್ಯಕ್ತಿಯ ಕುರಿತು ಸಂಪೂರ್ಣವಾಗಿ ಗೊತ್ತಿಲ್ಲದೇ ಏನನ್ನೂ ಹೇಳಬಾರದು ಎಂದು. ನಿಜಕ್ಕೂ ಒಂದು ಅಪೂರ್ವ ಅನುಭವ ನಿನಗಾದದ್ದು. ತುಂಬಾ ಚೆನ್ನಾಗಿತ್ತು..

  ReplyDelete
 2. ಇದು ಎಲ್ಲರಿಗೂ ಆದ ಒಂದು ಅನುಭವವಿರಬಹುದೇನೋ ಎಂದು ಅನಿಸಿತು, ಯಾಕೆಂದರೆ ಇಂತಹ ತಪ್ಪು ನಾನೂ ಕೂಡ ಮಾಡಿದ್ದೇನೆ. ನಮ್ಮ ಕಣ್ಣೆದುರಿಗೆ ಅವಿತು ಕೂತ ಹಲವಾರು ಗುಟ್ಟುಗಳು ನಮಗೆ ತಿಳಿಯದೆಯೇ ನಾವೇನೋ ಕತೆ ಕಿಚಾಯ್ಸಿರುತ್ತೇವೆ. ನಮ್ಮ ಬಗ್ಗೆಯೂ ಕೂಡ ಇದೆ ರೀತಿ ನಡೆಯುತ್ತೆ ಅಂತ ನಮಗೆ ತಿಳಿಯೋದೇ ಇಲ್ಲ. ಆಮೇಲೆ ಪಶ್ಚಾತ್ತಾಪ ಇದ್ದದ್ದೇ. ಅಲ್ಲವೇ?
  ಸುಂದರ ನಿರೂಪಣೆಯಲ್ಲಿ ನೈಜ ಕತೆ ಹೆಣೆದಿದ್ದೀರಿ ಪ್ರಿಯ ಗೆಳೆಯ.

  ReplyDelete
 3. ಗಣೇಶ ಖುಷಿ ಆತು, ಕಮೆಂಟ್ ನೋಡಿ.
  ಹೌದು, ನಾವು ಎಷ್ಟೋ ಸಲ ಗೊತ್ತಿದ್ದೋ ಗೊತ್ತಿಲ್ಲದೆಯೋ, ನಮಗೆ ಗೊತ್ತು ಎಂದು ತೋರಿಸಿಕೊಳ್ಳುವುದರ ಭರದಲ್ಲಿಯೋ ಅಥವಾ ಇನ್ನಾವುದರಲ್ಲಿಯೋ ಎಶ್ಟೋ ಜನರಿಗೆ ಸುಮ್ಮನೇ ನೋವನ್ನುಣಿಸುತ್ತೇವಲ್ಲ, ಅಂತಹ ಒಂದು ಸನ್ನಿವೇಶಕ್ಕೆ ಪ್ರಾಯಶ್ಚಿತ್ತ ಈ ಕವನ.

  ಪುಷ್ಪರಾಜ್ ಚೌಟರೇ ಧನ್ಯವಾದಗಳು, ನಾನು ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಟ್ಟಿದ್ದು ನಿಜ. ತಿಳಿದವರು ಹೇಳುತ್ತಾರಲ್ಲ, ’ತಪ್ಪಿಗೆ ನಿಜವಾದ ಪ್ರಾಯಶ್ಚಿತ್ತವೆಂದರೆ ಪಶ್ಚಾತ್ತಾಪವೇ ಎಂದು’ ಹಾಗೆ ನನಗೂ ಅದರ ದೋಷದಿಂದ ಮುಕ್ತಿ ಸಿಗಬಹುದು ಎಂದುಕೊಂಡಿದ್ದೇನೆ. ಇನ್ನ್ನು ಪ್ರತೀ ಬಾರಿ ಆಡಿಕೊಳ್ಳುವಾಗಲೂ ಹಿಂದೆ ಮುಂದೆ ನೋಡಿಕೊಳ್ಳಬೇಕೆಂಬ ತೀರ್ಮಾನ ತೆಗೆದುಕೊಂಡಿದ್ದೇನೆ, ಅದೂ ಗೌರವಾನ್ವಿತರ ಬಗ್ಗೆ.

  ReplyDelete
 4. ಸುಬ್ಬು, ಅವ್ರಿಗೆ ಕ್ಯಾನ್ಸರ್ ಇದ್ದು, ಅದಕ್ಕೆ ವಿಗ್ ಹಾಕ್ತ್ರು ಹೇಳಿ ಇನ್ನೂ ತನಕ ಗೊತ್ತಿತ್ತಿಲ್ಲೆ...
  ನಾನೂ ಅವರ ಬಗ್ಗೆ ಸಾಕಷ್ಟು ಆಡಿಕೊಂಡಿದ್ದೆ,ಎಲ್ಲರ ಹಾಗೆ... ಈ ವಿಚಾರ ತಿಳಿದ ಮೇಲೆ ತುಂಬಾ ಬೇಸರವಾಯ್ತು:( ಯಾರೊಬ್ಬರ ಬಗ್ಗೆಯೂ ವಿನಾ ಕಾರಣ ,ವಿಚಾರ ಗೊತ್ತಿಲ್ಲದೆ ಆಡಿಕೊಳ್ಳಬಾರದು ಎಂದು ಈಗ ಮನವರಿಕೆಯಾಯ್ತು... ಧನ್ಯವಾದ ಈ ವಿಷಯ ತಿಳಿಸಿದ್ದಕ್ಕೆ,ನನ್ನ ಕಣ್ಣು ತೆರೆಸಿದ್ದಕ್ಕೆ...

  ReplyDelete
 5. ಫಣೀಂದ್ರ, ನನಗೂ ಗೊತ್ತಾದಾಗ ಹೀಗೇ ಅನ್ನಿಸಿತ್ತು. ಆಅದರೆ ಮಾಡಿದ ತಪ್ಪು ಗೊತ್ತಿಲ್ಲದೇ ಮಾಡಿದ್ದೆಂದು ಸಮಾಧಾನ ಮಾಡಿಕೊಳ್ಳಬಹುದಷ್ಟೇ! ಆದರೂ ಮನಸ್ಪೂರಕವಾದ ಪಶ್ಚಾತ್ತಾಪ ಒಂದೇ ಇದಕ್ಕೆ ಪರಿಹಾರ. ಅಲ್ದಾ?

  ReplyDelete
 6. ಸರಳ ನೇರವಾದ ಬರಹ. ಬರವಣಿಗೆ ಮುಂದುವರೀಲಿ. ಅದೇ ವಿಚಾರವನ್ನು ಇನ್ನೊಂದು ಆಯಾಮದಲ್ಲಿ ನೋಡುವ ಬರವಣಿಗೆ ಹೊರಬರಲಿ.
  ಶಿಶಿರ ಹೆಗಡೆ
  @iHegde

  ReplyDelete